ಕನ್ಯಾಕುಮಾರಿ : ಭಾರತದ ದಕ್ಷಿಣತಮ ಭೂಶಿರ ಇದೇ ಹೆಸರಿನ ಜಿಲ್ಲೆ ತಮಿಳುನಾಡಿಗೆ ಸೇರಿದೆ. ಭೂಶಿರ ಉ. ಅ. 8º 4´ ಮತ್ತು ಪು. ರೇ. 77º 35´ ನಲ್ಲಿ ಪಶ್ಚಿಮಘಟ್ಟಗಳ ಶಾಖೆಯಾದ ಏಲಕ್ಕಿ ಗುಡ್ಡದ ದಕ್ಷಿಣತುದಿಯಲ್ಲಿದೆ. ಇಲ್ಲಿ ಕನ್ಯಾಕುಮಾರಿಯ ದೇಗುಲವಿರುವುದರಿಂದ ಈ ಸ್ಥಳಕ್ಕೆ ಕನ್ಯಾಕುಮಾರಿ ಎಂಬ ಹೆಸರು ಬಂದಿದೆ. ತಿರುವನಂತ ಪುರದಿಂದ ಇದು 87 ಕಿಮೀ ದೂರದಲ್ಲಿದೆ. ಇಲ್ಲಿಯ ಭೂಭಾಗ ಬಹು ಕಿರಿದಾಗಿದ್ದು ಸಮುದ್ರದೊಳಕ್ಕೆ ನಾಲಗೆಯಂತೆ ಚಾಚಿಕೊಂಡಿರುವುದರಿಂದ ಸೂರ್ಯೋದಯ ಸೂರ್ಯಾಸ್ತ ಗಳೆರಡೂ ಇಲ್ಲಿಂದ ನೋಡಲು ಬಲು ಚೆಲುವು, ವರ್ಣಮಯ. ಇದನ್ನು ನೋಡಲೆಂದೇ ಸಹಸ್ರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇದು ಹಿಂದೂಗಳ ಪುಣ್ಯಕ್ಷೇತ್ರ. ಭೂಭಾಗದ ದಕ್ಷಿಣತುದಿಯಲ್ಲಿ ಕನ್ಯಾಕುಮಾರಿಯ ಪುರಾತನ ದೇವಾಲಯವಿದೆ. ಇದು ಬಹು ಹಿಂದಿನಿಂದಲೂ ಕನ್ಯಾತೀರ್ಥವೆಂದು ಪ್ರಸಿದ್ಧವಾಗಿದ್ದಿತೆಂದು ಅನೇಕ ಶಾಸನಗಳಿಂದ ತಿಳಿದುಬರುತ್ತದೆ. ಕನ್ಯಾಕುಮಾರಿಯ ಬಳಿಯ ಸಮುದ್ರದಲ್ಲಿ ಸ್ನಾನ ಮಾಡಿ ಕನ್ನಿಕಾಪರಮೇಶ್ವರಿ ಯನ್ನು ಪುಜಿಸಿದರೆ ಸರ್ವಪಾಪಗಳಿಂದ ವಿಮೋಚನೆಯಾಗುತ್ತದೆಂದು ನಂಬಿಕೆ. ಕಾಶಿಯ ಒಬ್ಬ ಬ್ರಾಹ್ಮಣನ ಹೆಂಡತಿ ಪಾತಿವ್ರತ್ಯ ಕೆಡಿಸಿಕೊಂಡು ಪಶ್ಚಾತ್ತಾಪಹೊಂದಿ ಕನ್ಯಾಕುಮಾರಿಗೆ ನಡೆದು ಬಂದು ಅಲ್ಲಿ ದೇವರ ಪುಜೆ ಮಾಡಿ ಪಾಪವಿಮುಕ್ತಳಾದಳೆಂಬ ಒಂದು ಸ್ಥಳಪುರಾಣವಿದೆ. ದೇವಾಲಯದ ಸಮೀಪದಲ್ಲಿರುವ ಗಾಂಧೀಸ್ಮಾರಕ ಇತ್ತೀಚೆಗೆ ಕಟ್ಟಿದ ಒಂದು ಸುಂದರ ಕಟ್ಟಡ. ಭೂಭಾಗದ ಅಂಚಿನಿಂದ ಕೆಲವೇ ಮೀ ಗಳ ದೂರದಲ್ಲಿ ವಿವೇಕಾನಂದರ ಬಂಡೆ ಎಂಬ ನಡುಗಡ್ಡೆಯಿದೆ. ಇಲ್ಲಿ ವಿವೇಕಾನಂದರ ಬೃಹತ್ ಸ್ಮಾರಕವೊಂದರ ನಿರ್ಮಾಣವಾಗಿದೆ. ಕನ್ಯಾಕುಮಾರಿ ಮೀನುಗಾರಿಕೆ ಕೇಂದ್ರ ಕೂಡ. ಕಡಲ ದಂಡೆಯ ಮರಳಿನಲ್ಲಿ ಇಲ್ಮನೈಟ್ ಮತ್ತು ಮೊನಾಜೈ಼ಟ್ ನಿಕ್ಷೇಪಗಳಿವೆ.

ಕನ್ಯಾಕುಮಾರಿ ಜಿಲ್ಲೆಯ ವಿಸ್ತೀರ್ಣ 1669 ಚ.ಕಿಮೀ. ಜನಸಂಖ್ಯೆ 16,69,763, ನಗರದ ಜನಸಂಖ್ಯೆ 19,678. ಈ ಪ್ರದೇಶ ಮೊದಲು ಕೇರಳಕ್ಕೆ ಸೇರಿತ್ತು. 1956ರಲ್ಲಿ ಇದನ್ನು ಮದ್ರಾಸಿಗೆ (ಈಗಿನ ತಮಿಳುನಾಡು) ಸೇರಿಸಿ ಕನ್ಯಾಕುಮಾರಿ ಜಿಲ್ಲೆಯನ್ನು ನಿರ್ಮಿಸಲಾಯಿತು. ನಾಗರ್ ಕೋಯಿಲ್ ಈ ಜಿಲ್ಲೆಯ ಮುಖ ಪಟ್ಟಣ (ನೋಡಿ- ನಾಗರ್ಕೋಯಿಲ್).	(ಎನ್.ಎ.ಎಸ್.ಎನ್.ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ